ಸಮರ್ಪಿಸಲ್ಪಟ್ಟ ಈದ್ ಸಮರ್ಪಣೆಗೆ ಸಮರ್ಪಿತ….

ಹಝ್ರತ್ ಇಬ್ರಾಹೀಂ (ಅ.ಸ) ಹಾಗೂ ಅವರ ಕುಟುಂಬ ಅಲ್ಲಾಹನ ದೀನಿಗಾಗಿ ನಿರ್ವಹಿಸಿದ ತ್ಯಾಗ ಮತ್ತು ಸಮರ್ಪಣೆಯನ್ನು ವರ್ತಮಾನ ಮುಸ್ಲಿಮರಿಗೆ ನೆನಪಿಸಲು ಈದ್ ಬರುತ್ತಿದೆ! ಇಡೀ ಜಗತ್ತಿನ ದೃಷ್ಟಿಯನ್ನು ಪ್ರಸ್ತುತ ಕುಟುಂಬದ ಕಡೆ ಸದಾ ಸೆಳೆಯುವಂತೆ, ಅವರ ತ್ಯಾಗದ ಸ್ಮರಣೆಯನ್ನು ಅಲ್ಲಾಹನು ನೆಲೆನಿಲ್ಲಿಸಿದ್ದಾನೆ! ಯಾಕೆ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿದರೆ ಈದುಲ್ ಅಲ್ಹಾದ ಸಂದೇಶ ನಮಗೆ ಅರ್ಥವಾದೀತು.

ವಿಶುದ್ಧ ದೀನಿನ ಸತ್ಯ ಸಂದೇಶ ನಮಗೆ ತಲುಪಿದೆ. ನಾವು ಮುಸ್ಲಿಮರಾಗಿ ಬದುಕುತ್ತಿದ್ದೇವೆ. ಆದರೆ ದೀನಿಗಾಗಿ ನಾವೇನು ತ್ಯಾಗ ಮಾಡಿದ್ದೇವೆ ? ನಮ್ಮ ಜೀವನ ಶೈಲಿಯಲ್ಲಿ ಇಸ್ಲಾಮಿಗಾಗಿ ರಾಜಿಮಾಡಲು ಕೂಡ ನಾವು ತಯಾರಾಗುವುದು ವಿರಳವಾಗುತ್ತಿದೆ. ಇಸ್ಲಾಂ ಕಲಿಸಿಕೊಟ್ಟ ಜೀವನ ಶೈಲಿ, ವಸ್ತ್ರ ವಿಧಾನ, ಆಹಾರ ಪದ್ದತಿ, ವೇಷಭೂಷಣ ಇವೆಲ್ಲವನ್ನೂ ಮೀರಲು ನಾವು ಇದೇ ಈದಿನವನ್ನೇ ಆಯ್ಕೆಮಾಡುತ್ತೇವೆ! ಅಂದರೆ ಈ ದಿನವನ್ನು ನಾವು ಯಾಕೆ ಬೇಕಾಗಿ ಆಚರಿಸುತ್ತಿದ್ದೇವೆ ಎಂಬುವುದರ ಕನಿಷ್ಠ ಜ್ಞಾನವು ಕೂಡ ನಮಗೆ ಅರಿವಿಲ್ಲದಾಗಿದೆ.

ನಾಲ್ಕು ಸಾವಿರ ವರ್ಷಗಳ ಆಚೆಗೆ ಮಾನವ ಜೀವನದ ಇತಿಹಾಸದಲ್ಲಿ ನವ ನಾಗರಿಕತೆಯನ್ನು ಕಲಿಸಿದ ಪ್ರವಾದಿಯಾಗಿದ್ದರು ಹಝ್ರತ್ ಇಬ್ರಾಹೀಂ ಆ.ಸ. ಮಾನವನ ಶಾರೀರಿಕ ಶುದ್ಧಿಯನ್ನು ಅವರು ಕಲಿಸಿದ್ದರು. ಮುಂದೆ ಕರ್ಮವನ್ನು ಗೇಲಿ ಮಾಡುವ ದಡ್ಡರ ಸಂತೆ ಈಗಲೂ ಇದೆ! ಆದರೆ ಅದರ ವೈಜ್ಞಾನಿಕ ಸತ್ಯ ಅರಿತವರು ನಾಲ್ಕು ಸಾವಿರ ವರ್ಷಗಳ ಹಿಂದೆ ಇದನ್ನು ಹೇಗೆ ತಿಳಿದು ಹೇಳಿದರೆಂದು ಆಶ್ಚರ್ಯ ವ್ಯಕ್ತಪಡಿಸುವ ಜ್ಞಾನಿಗಳೂ ಇದ್ದಾರೆ. ಬುದ್ದಿ ಇರುವವರು ಆಲೋಚಿಸಲಿ ಎಂದು ಖುರ್‌ಆನ್ ಹೇಳಿರುವುದರ ಮರ್ಮ ಇಲ್ಲಿ ಸಾಂದರ್ಭಿಕ, ಕ್ಯಾನ್ಸರ್ ನಂತಹ ಮಾರಕ ರೋಗಗಳಿಂದ ಸುರಕ್ಷಿತರಾಗಲು, ಲೈಂಗಿಕ ತೃಪ್ತಿಗಾಗಿಯೂ ಮುಂದೆ ಕರ್ಮ ಮಾಡಲೇ ಬೇಕು ಎಂದು ಆಧುನಿಕ ಜಗತ್ತು ಒಪ್ಪಿಕೊಳ್ಳುತ್ತಿದೆ ಮತ್ತು ಪಾಶ್ಚಿಮಾತ್ಯ ರಾಜ್ಯಗಳ ಬಹುತೇಕ ಜನರು ಈ ಕರ್ಮವನ್ನು ಮಾಡಿಸುತ್ತಿದ್ದಾರೆ ಎಂದು ವರದಿಗಳು ದೃಡಪಡಿಸುತ್ತದೆ.

ಶಾರೀರಿಕ ಆಶುದ್ದಿಗಳು, ಮೈ ತೋರಿಸಿ ಕೊಳಕು ಹರಡುವ ಕಾಲದಲ್ಲಿ, ಅದರ ಪ್ರೇಕ್ಷಕರಾಗಿಯೂ ವಾಹಕರಾಗಿಯೂ ನಮ್ಮ ಸಮುದಾಯದ ನವ ತಲೆಮಾರು ಬದಲಾಗುವಾಗ ಈದಿನ ಸುದಿನ ಅವರನ್ನೂ ಸರಿದಾರಿಗೆ ತರಲಿ, ಇಸ್ಲಾಂ ಎಂದರೆ ಆರಾಧನೆ ಮಾತ್ರವಲ್ಲ ಅದೊಂದು ಅತ್ಯುತ್ತಮ ಜೀವನ ಶೈಲಿಯಾಗಿದೆ. ದೈಹಿಕ, ಮಾನಸಿಕ ಆರೋಗ್ಯವಂತನಾಗಿ ಸಮಾಜಕ್ಕೆ ಉಪಕಾರಿಯಾಗಿ ಬದುಕುವ ಜೀವನ ವಿಧಾನ. ಉತ್ತಮ ನಾಗರಿಕ ಬದುಕಿನವರಾಗಿದ್ದರು ಇಬ್ರಾಹೀಂ ಅ.ಸ ವಾಹಕರಾಗಿದ್ದರು. ಅವರ ಮಿಲ್ಲತ್ ನಮಗೆ ಮೋಡೆಲ್ ಆಗಲಿ.

ಕೌಟುಂಬಿಕ ಬದುಕು ಇಸ್ಲಾಮೀ ಜೀವನ ಶೈಲಿಯ ತಳಹದಿ. ಅದು ಹಸನಾಗಿರಲು ಇಸ್ಲಾಂ ಬಹಳಷ್ಟು ತಾಕೀತು ನೀಡಿದೆ. ವಿಶುದ್ಧ ಕಲಿಯ ತೌಹೀದಿಗೆ ಸಮರ್ಪಿಸಲ್ಪಟ್ಟ ಧರ್ಮನಿಷ್ಠ ಕುಟುಂಬ ನಮ್ಮವಾಗಬೇಕು. ಇಬ್ರಾಹೀಂ ಅ.ಸ, ಧರ್ಮ ಪತ್ನಿ ಹಾಜರಾ ಬೀವಿ ಹಾಗೂ ಮಗ ಇಸ್ಮಾಯಿಲ್ ಆ.ಸ ಕುಟುಂಬದ ಆ ಸ್ಮರಣೆ ದೀನಿನ ತ್ಯಾಗಕ್ಕೆ ಲಭಿಸಿದ ಗೌರವಾವಾಗಿದೆ.

ಬರಹಗಾರರು :ಅಬೂಬಕ್ಕರ್ ಕೌಸರಿ ಕುದ್ರಡ್ಕ