ಮಡಿಕೇರಿ: ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಸಾಗಣೆ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿರುವ ಘಟನೆ ಕೊಡಗು ಜಿಲ್ಲೆಯ ವೀರಾಜಪೇಟೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಸುಮಾರು 28 ಲಕ್ಷ ರೂ. ಮೌಲ್ಯದ 45 ಬೀಟೆ ಮರದ ದಿಮ್ಮಿಗಳು ಹಾಗೂ ಸಾಗಣೆಗೆ ಬಳಸಿದ್ದ ಲಾರಿಯನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕೇರಳದ ಮಲ್ಲಪುರಂ ಮೂಲದ ಲಾರಿ ಮಾಲೀಕ ಹಾಗೂ ಚಾಲಕ ಅಬ್ದುಲ್ ಶುಕೂರ್‌ನನ್ನು ಬಂಧಿಸಲಾಗಿದೆ.
ಲಾರಿಯಲ್ಲಿದ್ದ ಸುಮಾರು 28 ಲಕ್ಷ ರೂ. ಬೆಲೆ ಬಾಳುವ 45 ಬೀಟೆ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಡಗಿನಿಂದ ಕಾಫಿ ಹಾಗೂ ಮರದ ಹೊಟ್ಟು ತುಂಬಿದ ಚೀಲಗಳ ನಡುವೆ ಬೀಟೆ ಮರದ ದಿಮ್ಮಿಗಳನ್ನು ಅಡಗಿಸಿ ಸಾಗಣೆ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ಹುಣಸೂರು-ಹೆಚ್.ಡಿ.ಕೋಟೆ ಮುಖ್ಯರಸ್ತೆಯ ಆಜಾದ್ ನಗರ ಪೆಟ್ರೋಲ್ ಬಂಕ್ ಬಳಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಲಾರಿಯೊಳಗೆ ಅಡಗಿಸಿಟ್ಟಿದ್ದ ಬೀಟೆ ಮರದ ದಿಮ್ಮಿಗಳು ಪತ್ತೆಯಾಗಿವೆ
