ಮಂಗಳೂರು: ಆನ್‌ಲೈನ್ ಹೂಡಿಕೆ ಹೆಸರಲ್ಲಿ ಸಾಲು ಸಾಲು ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದರೂ ಜನರು ಮಾತ್ರ ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಬಗ್ಗೆ ಪೊಲೀಸರು, ಗೃಹ ಇಲಾಖೆ ಜಾಗೃತಿ ನಡೆಸಿದರೂ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವರ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಆನ್‌ಲೈನ್ ಅಮೆರಿಕನ್ ಕಮಾಡಿಟೀಸ್ ಹೂಡಿಕೆಯಲ್ಲಿ ಹೆಚ್ಚಿನ ಲಾಭ ದೊರೆಯುವ ಆಸೆಗೆ ಬಿದ್ದ 74 ವರ್ಷದ ಮಂಗಳೂರಿನ ವ್ಯಕ್ತಿಯೋರ್ವರು ಬರೋಬ್ಬರಿ 1.77 ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ.ವೆಂಟ್ರೇಡ್ ಎಂಬ ಕಂಪನಿಯಿಂದ ಶೋಯಬ್ ಘೌರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕಳೆದ ಡಿಸೆಂಬರ್ 24ರಂದು ಸಂತ್ರಸ್ತರಿಗೆ ದೂರವಾಣಿ ಕರೆ ಮಾಡಿದ್ದ. ಅಮೆರಿಕನ್ ಕಮಾಡಿಟೀಸ್ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಅವರಿಗೆ ಆಸೆ ತೋರಿಸಿದ್ದ ಆತ, ನೀವು ಭಾರತೀಯ ರೂಪಾಯಿಯಲ್ಲಿ ವರ್ಗಾಯಿಸುವ ಹಣವನ್ನು ಅಮೆರಿಕನ್ ಡಾಲರ್‌ಗೆ ಪರಿವರ್ತಿಸಿ ನಿಮ್ಮ ಪರವಾಗಿ ಹೂಡಿಕೆ ಮಾಡುತ್ತೇನೆ ಎಂಬಿತ್ಯಾದಿ ಬಣ್ಣ ಬಣ್ಣದ ಮಾತುಗಳನ್ನಾಡಿ ಅವರನ್ನು ನಂಬಿಸಿದ್ದ. ಈತನ ಮಾತು ನಿಜವಿರಬಹುದೆಂದು ಸಂತ್ರಸ್ತ ವ್ಯಕ್ತಿಯೂ ನಂಬಿದ್ದರು. ಬಳಿಕ ಆರೋಪಿ ಇಮೇಲ್, ವಾಟ್ಸ್ಯಾಪ್ ಮತ್ತು ಫೋನ್ ಕರೆಗಳ ಮೂಲಕ ದೂರುದಾರರೊಂದಿಗೆ ಸಂಪರ್ಕದಲ್ಲಿದ್ದ ಹಿನ್ನೆಲೆ ಆರಂಭದಲ್ಲಿ ದೂರುದಾರರು ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಿದ್ದರು. ಆರೋಪಿ ನೀಡಿದ್ದ ಭರವಸೆಯಂತೆ ಆ ಹಣಕ್ಕೆ ಸ್ವಲ್ಪ ಮಟ್ಟಿನ ಲಾಭವೂ ದೂರುದಾರರ ಖಾತೆಗೆ ಜಮಾ ಆಗಿತ್ತು ಎನ್ನಲಾಗಿದೆ.
