ರಾಯಚೂರಿನಲ್ಲಿ ಪೆಟ್ರೋಲ್ ಬಂಕ್‌ನಲ್ಲಿ 10 ರೂ.ಗಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ

|

ರಾಯಚೂರು 11/07/26: ಕೇವಲ 10 ರೂಪಾಯಿ ವಿಚಾರಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಜಿಲ್ಲೆಯ ಹಂಚಿನಾಳ ಕ್ಯಾಂಪ್ ಸಮೀಪದ ಪೆಟ್ರೋಲ್ ಬಂಕ್​​ನಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ಸಂಬಂಧ 6 ಮಂದಿ ಆರೋಪಿಗಳನ್ನು ಇಡಪನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೃತರನ್ನು ಮೇಘನಾಥ್ (42) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ರವಿ, ವೀರೇಶ, ನರಸಿಂಹ, ಮಾರೆಪ್ಪ, ರಮೇಶ ಹಾಗೂ ಪ್ರವೀಣ ಎಂಬವರನ್ನು ಬಂಧಿಸಲಾಗಿದೆ.

ಜುಲೈ 8ರಂದು ರಾತ್ರಿ ಹಂಚಿನಾಳ ಪೆಟ್ರೋಲ್ ಬಂಕ್​ನಲ್ಲಿ ಮಹೇಶ ಎಂಬವರು ಪೆಟ್ರೋಲ್ ತೆಗೆದುಕೊಂಡಿದ್ದು, 10 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ಬಂಕ್​​ ಸಿಬ್ಬಂದಿ ರವಿ ಹಾಗೂ ಮಹೇಶ ನಡುವೆ ಜಗಳ ಆರಂಭವಾಗಿದೆ. ಆಗ ಜೊತೆಗಿದ್ದ ನಾಗರಾಜ್​ ಹಾಗೂ ಕೊಲೆಗೀಡಾದ ಮೇಘನಾಥ್ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಮೇಘನಾಥ್​ ಮೇಲೆ ಗಂಭೀರ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

      ಬಂಕ್​ನಲ್ಲಿ ಮಹೇಶ ಪೆಟ್ರೋಲ್ ತೆಗೆದುಕೊಂಡಿದ್ದು, ಆತ 10 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ಬಂಕ್​​ನ ಸಿಬ್ಬಂದಿ ರವಿ ಹಾಗೂ ಮಹೇಶ ನಡುವೆ ಜಗಳವಾಗಿದೆ. ಜೊತೆಗಿದ್ದ ನಾಗರಾಜ್​ ಹಾಗೂ ಮೇಘನಾಥ ಜಗಳ ಬಿಡಿಸಲು ಮುಂದಾಗಿದ್ದಾರೆ. ಆಗ ಬಂಕ್​ನಲ್ಲಿದ್ದ ಆರೋಪಿಗಳು ನೀನ್ಯಾಕೆ ನಮ್ಮ ಜಗಳದಲ್ಲಿ ಅಡ್ಡ ಬರುತ್ತೀಯಾ? ನಿಂದು ಬಹಳ ಆಗಿದೆ, ನಿನ್ನನ್ನು ಇಂದು ಸುಮ್ಮನೆ ಬಿಡುವುದಿಲ್ಲ ಅಂತಾ ನರಸಿಂಹ ಮತ್ತು ಮಾರೆಪ್ಪ ಅವರು ಮೇಘನಾಥ್​ಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದಿಸಿದ್ದಾರೆ. ಆಗ ವೀರೇಶ್​ ಎಂಬಾತ ಮೇಘನಾಥ್​ಗೆ ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದಾರೆ. ಇದೇ ವೇಳೆ ರವಿ ಕೂಡ ಕಟ್ಟಿಗೆ ತೆಗೆದುಕೊಂಡು ಮೇಘನಾಥ್​​ನ ತಲೆಗೆ ಬಾರಿಸಿದರೆ, ನರಸಿಂಹ ಸಹ ಕಟ್ಟಿಗೆಯಿಂದ ಮೇಘನಾಥ್​ನ ಬೆನ್ನಿಗೆ ಜೋರಾಗಿ ಹೊಡೆದಿದ್ದು, ಆತ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾನೆ. ಈ ವೇಳೆ ಜಗಳ ಬಿಡಿಸಲು ಹೋದ ಮಹೇಶ ಮತ್ತು ನಾಗರಾಜನಿಗೂ ಆರೋಪಿತರು ಹಲ್ಲೆ ಮಾಡಿದ್ದಾರೆ ಎಂದು ಮೇಘನಾಥ್​ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ತೀವ್ರ ಗಾಯಗೊಂಡ ಮೇಘನಾಥ್​ನನ್ನು ರಾಯಚೂರಿನ ಬಾಲಂಕು ಆಸ್ಪತ್ರೆಗೆ ದಾಖಲಿಸಿ ಗುರುವಾರ ಮುಂಜಾನೆ ತಲೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಬೆಳಗ್ಗೆ 8.25ರ ಸುಮಾರಿಗೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಘಟನೆಯ ದೃಶ್ಯಗಳು ಪೆಟ್ರೋಲ್ ಬಂಕ್​​ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇಡಪನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್​​ಗಳಡಿ ಪ್ರಕರಣ ದಾಖಲಾಗಿದೆ.