ರಾಮಕುಂಜ :ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಮಾರೋಪ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ವಸಂತಕುಮಾರ್ ಅವರು " ರಾಷ್ಟ್ರೀಯ ಸೇವಾ ಯೋಜನಾ ಘಟಕವು ವಿದ್ಯಾರ್ಥಿಗಳಲ್ಲಿ ಸ್ವತ್ವದ ಭಾವನೆಯನ್ನು ಮೂಡಿಸುತ್ತದೆ. ಈ ನೆಲ, ಪರಿಸರ, ಸಮಾಜ ನನ್ನದು ಎಂದು ಭಾವಿಸಿದಾಗ ಮಾತ್ರವೇ ಸೇವೆಯನ್ನ ಮಾಡಲು ಸಾಧ್ಯ. ಇಂತಹ ಸೇವೆಯನ್ನು ಮಾಡಿದ ಕಾಲೇಜಿನ ಎನ್.ಎಸ್.ಎಸ್ ಘಟಕವು ಮುಂದಿನ ವರುಷದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ" ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಅವರು ಮಾತನಾಡುತ್ತಾ " ಈ ವರ್ಷ ನಮ್ಮ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಅಪೂರ್ವವಾಗಿ ಕೆಲಸ ಮಾಡಿದ್ದು, ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ಕಾರ್ಯಕ್ರಮಗಳಿಗೆ ಸ್ವಯಂಸೇವಕರಾಗಿ ಸೇವೆ, ಸ್ವಯಂಸೇವಕರಿಗೆ ತರಬೇತಿ, ವಾರ್ಷಿಕ ವಿಶೇಷ ಶಿಬಿರ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಘಟಕವು ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದೆ. "ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿದ್ದಂತಹ ಘಟಕದ ಯೋಜನಾಧಿಕಾರಿಗಳಾದ ಶ್ರೀ ಕೀರ್ತನ್ ಇವರು ಇಡೀ ವರ್ಷದ ವಿವಿಧ ಚಟುವಟಿಕೆಗಳ ಮುಖ್ಯಾಂಶಗಳನ್ನು ವಾಚಿಸಿದರು. ಆ ಬಳಿಕ ಹಿರಿಯ ಉಪನ್ಯಾಸಕರಾದ ಶ್ರೀ ವಸಂತ ಕುಮಾರ್ ಅವರನ್ನು ಎನ್ಎಸ್ಎಸ್ ಘಟಕದ ವತಿಯಿಂದ ಸನ್ಮಾನಿಸಲಾಯಿತು.ವೇದಿಕೆಯಲ್ಲಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕ ಲಿಖಿತ್ ರೈ ಮತ್ತು ನಾಯಕಿ ರಕ್ಷಾ ಜೆ ರೈ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಹ ಯೋಜನಾಧಿಕಾರಿಗಳಾದ ಶ್ರೀ ಶಿವಪ್ರಸಾದ್ ಮತ್ತು ಕುಮಾರಿ ಅಕ್ಷತಾ ಉಪಸ್ಥಿತರಿದ್ದರು. ಎನ್ಎಸ್ಎಸ್ ಸ್ವಯಂಸೇವಕರಾದ ಕುಮಾರಿ ಶ್ರಾವ್ಯ ಸ್ವಾಗತಿಸಿದರು. ಸ್ವಯಂಸೇವಕರಾದ ಕುಶಾಂತ್ ಧನ್ಯವಾದ ಸಮರ್ಪಿಸಿದರು. ಸ್ವಯಂಸೇವಕರಾದ ಶಹನಿ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು. ಸ್ವಯಂಸೇವಕರಾದ ಪ್ರೈಶಿಕ ಕಾರ್ಯಕ್ರಮ ನಿರೂಪಿಸಿದರು.ಎನ್ಎಸ್ಎಸ್ ಘಟಕದ ಪ್ರಥಮ ವರ್ಷದ ಸ್ವಯಂಸೇವಕರು ಕಾರ್ಯಕ್ರಮದ ಆಯೋಜನೆಯನ್ನು ಮಾಡಿದರು.
