
ಉಪ್ಪಿನಂಗಡಿ: ಇಲ್ಲಿನ ಕೂಟೇಲು ಸೇತುವೆಯ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರೊಂದು ಬೈಕ್ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ವಿದ್ಯಾರ್ಥಿಗಳಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅ.14ರಂದು ನಡೆದಿದೆ.ಹಿರೇಬಂಡಾಡಿ ಗ್ರಾಮದ ನಿವಾಸಿ ಯತೀಶ್ (20) ಹಾಗೂ ಉಪ್ಪಿನಂಗಡಿ ಪೇಟೆಯ ನಿವಾಸಿ ಅವನೀಶ್ (20) ಗಾಯಗೊಂಡ ಬೈಕ್ ಸವಾರರು. ಇವರು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮಧ್ಯಾಹ್ನ ಊಟಕ್ಕೆಂದು ಉಪ್ಪಿನಂಗಡಿ ಕಡೆಯಿಂದ ಕೂಟೇಲುನಲ್ಲಿರುವ ಕ್ಯಾಂಟೀನ್ಗೆ ತೆರಳುತ್ತಿದ್ದ ಇವರು ಹೆದ್ದಾರಿಯಿಂದ ಬಲ ಪಾರ್ಶ್ವದಲ್ಲಿರುವ ಹೊಟೇಲ್ಗೆ ತಿರುವು ಪಡೆಯುತ್ತಿದ್ದ ಸಂದರ್ಭ ಹಿಂಬದಿಯಿಂದ ಅತೀ ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಇವರ ಬೈಕ್ಗೆ ಢಿಕ್ಕಿ ಹೊಡೆದಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಢಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಹೆಲ್ಕೆಟ್ ಎರಡು ಭಾಗವಾಗಿದೆ. ಗಾಯಾಳುಗಳನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
