ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡಿ'ಅಲ್ವೇಡಾ ; ಸೇಂಟ್ ಅಲೋಶಿಯಸ್ ಎನ್‌ಸಿಸಿಯಿಂದ ಭಾರತೀಯ ನೌಕಾಪಡೆ ಅಧಿಕಾರಿ

|

ಮಂಗಳೂರು, ಮೇ 27 : ದೊಡ್ಡ ಹುದ್ದೆಯ ಕನಸು ಕಾಣುವ ಪ್ರತಿಯೊಬ್ಬರಿಗೂ ಮಂಗಳೂರಿನ ‌ ನಿಶೆಲ್ ಫ್ಲೋರಾ ಡಿ'ಅಲ್ನೋಡಾ ಅವರ ಬದುಕಿನ ಪಯಣ ಸ್ಫೂರ್ತಿಯಾಗಿದೆ. ಮಂಗಳೂರಿನ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿನಿಯಾಗಿರುವ ನಿಶೆಲ್, ಪ್ರತಿಷ್ಠಿತ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೇನಾ ತರಬೇತಿ ಪೂರ್ಣಗೊಳಿಸಿ ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಹುದ್ದೆಗೆ ನೇಮಕಗೊಂಡಿದ್ದಾರೆ.

ಅವರ ಈ ಸಾಧನೆ ಕೇವಲ ಕುಟುಂಬಕ್ಕಷ್ಟೇ ಸೀಮಿತವಾಗಿಲ್ಲ ; ಸಾಮಾನ್ಯ ವಿದ್ಯಾರ್ಥಿನಿಯಿಂದ ದೇಶಸೇವೆಯ ಜವಾಬ್ದಾರಿಯುತ ಹುದ್ದೆಯ ವರೆಗೆ ಅವರ ಪಯಣ ಅನೇಕ ಯುವಕರಿಗೆ ಪ್ರೇರಣೆಯ ಕಥೆಯಾಗಿದೆ. ಶಾಲಾ ದಿನಗಳಿಂದಲೇ ನಿಶೆಲ್ ಪ್ರತಿಭಾವಂತೆ ಹಾಗೂ ಶಿಸ್ತುಬದ್ಧ ವಿದ್ಯಾರ್ಥಿನಿಯಾಗಿದ್ದರು. ವಿದ್ಯಾಭ್ಯಾಸದ ಜೊತೆಗೆ ಕಲೆ, ಕ್ರೀಡೆ, ನಾಯಕತ್ವ ಕಾರ್ಯಕ್ರಮಗಳು, ನೃತ್ಯ, ಸಂಗೀತ, ಚಿತ್ರಕಲೆ, ಕರಾಟೆ ಹಾಗೂ ಕಾರ್ಯಕ್ರಮ ನಿರೂಪಣೆಯಲ್ಲೂ ಅವರು ಸಕ್ರಿಯವಾಗಿದ್ದರು. ಅವರ ಬಹುಮುಖ ಪ್ರತಿಭೆ ಮತ್ತು ಆತ್ಮವಿಶ್ವಾಸವೇ ಅವರನ್ನು ಇತರರಿಂದ ವಿಭಿನ್ನವಾಗಿಸಿತ್ತು.

ಎನ್‌ಸಿಸಿ ತರಬೇತಿಯಲ್ಲಿ ಭಾಗವಹಿಸಿದ್ದ ನಿಶೆಲ್, ತಮ್ಮ ನಾಯಕತ್ವ ಗುಣಗಳಿಂದ ವಿಶೇಷ ಮೆಚ್ಚುಗೆ ಗಳಿಸಿದ್ದರು.ತಮ್ಮ ಶಿಕ್ಷಣ ಸಂಸ್ಥೆಯಿಂದ ಗಣರಾಜ್ಯೋತ್ಸವ ಪಥಸಂಚಲನ ಶಿಬಿರಕ್ಕೆ ಆಯ್ಕೆಯಾದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಯೂ ಅವರಿಗೆ ಸಂದಿತ್ತು. ಇದೇ ಅವರ ದೇಶಸೇವೆಯ ಕನಸಿಗೆ ಬಲವಾದ ಅಡಿಪಾಯವಾಗಿತ್ತು.

ಪಿಯು ಶಿಕ್ಷಣದ ಬಳಿಕ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿದರು. ಆದರೆ ಅವರ ಕನಸು ಅಲ್ಲಿ ನಿಂತಿರಲಿಲ್ಲ. ಭಾರತೀಯ ಸಶಸ್ತ್ರ ಪಡೆಗಳಿಗೆ ಪ್ರವೇಶ ನೀಡುವ ಆಯ್ಕೆ ಪ್ರಕ್ರಿಯೆಗಳಲ್ಲಿ ಒಂದಾದ SSB ಪರೀಕ್ಷೆಗೆ ಸಿದ್ಧತೆ ನಡೆಸಿದರು. ಅದರಲ್ಲಿ ತೇರ್ಗಡೆಗೊಂಡು ಸೇನಾ ತರಬೇತಿ ಪೂರ್ತಿಗೊಳಿಸಿ ಸಬ್ ಲೆಫ್ಟಿನೆಂಟ್ ಹುದ್ದೆಗೆ ನೇಮಕಗೊಂಡಿದ್ದಾರೆ.