ಸುಬ್ರಮಣ್ಯ 02-08-2026:ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಮೈಸೂರು ವಿಭಾಗದ ಎಡಕುಮೇರಿ-ಸಿರಿಭಾಗಿಲು ನಿಲ್ದಾಣಗಳ ನಡುವೆ ಘಾಟ್ ಮಾರ್ಗದಲ್ಲಿ ಶನಿವಾರ ರಾತ್ರಿ 8:45ರ ಸುಮಾರಿಗೆ ಗುಡ್ಡ ಕುಸಿತವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳ ಸಂಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.ಈ ಕುರಿತು ನೈಋತ್ಯ ರೈಲ್ವೆ (South Western Railway) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕಾನಮಡಿ ಅವರು ಮಾಹಿತಿ ನೀಡಿದ್ದಾರೆ.
ನಿರಂತರವಾಗಿ ಗುಡ್ಡ ಕುಸಿತವಾಗುತ್ತಿದ್ದು, ಭಾರೀ ಮಳೆಯಿಂದಾಗಿ ಪುನರ್ ನಿರ್ಮಾಣ ಕಾರ್ಯಕ್ಕೆ ಅಡಚಣೆಯಾಗುತ್ತಿದೆ. ಆದರೂ, ರೈಲ್ವೆ ಇಲಾಖೆ ಹೆಚ್ಚುವರಿ ಹಿಟಾಚಿಗಳನ್ನು ಸ್ಥಳಕ್ಕೆ ರವಾನಿಸಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ನೈಋತ್ಯ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಸುರಕ್ಷಿತ ಹಾಗೂ ಶೀಘ್ರ ರೈಲು ಸಂಚಾರ ಪುನರಾರಂಭಕ್ಕೆ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
