ಕಡಬ ತಾಲೂಕು ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ತಂಡಗಳು ಪ್ರಥಮ

|

ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕಡಬ ತಾಲೂಕು ಮಟ್ಟದ ಪಿಯುಸಿ ಬಾಲಕ ಬಾಲಕಿಯರ ಖೋ-ಖೋ ಪಂದ್ಯಾವಳಿಯು ನಡೆಯಿತು. 

 ಪಂದ್ಯಾವಳಿಯ ಉದ್ಘಾಟನೆಯನ್ನು ನೆರವೇರಿಸಿದ ಅಂತರಾಷ್ಟ್ರೀಯ ಮಟ್ಟದ  ಖೋ-ಖೋ ಆಟಗಾರ್ತಿ ಮತ್ತು ಪ್ರಸ್ತುತ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ದೀಕ್ಷಾ ಕೆ ಯವರು ಮಾತನಾಡುತ್ತಾ " ಕ್ರೀಡೆಯು ಶಿಸ್ತು ಮತ್ತು ಸಂಯಮವನ್ನು ಕೇಂದ್ರೀಕರಿಸಿ ವ್ಯಕ್ತಿಗಳನ್ನು ಬೆಳೆಸುವ ಪ್ರಕ್ರಿಯೆಯಾಗಿದೆ. ಪ್ರತಿ ಆಟದ ಯಶಸ್ಸು ವಿದ್ಯಾರ್ಥಿಗಳ ಸಾಮರ್ಥ್ಯದಲ್ಲಿ ಮಾತ್ರವಲ್ಲದೆ ಅವರ ಶಿಸ್ತು ಮತ್ತು ತಾಳ್ಮೆಯಲ್ಲಿ ನೆಲೆಸಿರುತ್ತದೆ. ವಿದ್ಯಾರ್ಥಿಗಳಲ್ಲಿ ಇಂತಹ ಗುಣಗಳು ಬೆಳೆದಾಗ ಅವರು ಉತ್ತಮ ನಾಗರೀಕರಾಗಲು ಸಾಧ್ಯ. ಸೋಲು ಗೆಲುವು ಏನೇ ಬಂದರೂ, ಸಕಾರಾತ್ಮಕವಾಗಿ ಪರಿಗಣಿಸಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು" ಎಂಬ ಸಂದೇಶವನ್ನು ನೀಡಿದರು. 

 ಅತಿಥಿಗಳಾದ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಮತ್ತು ನೆಲ್ಯಾಡಿಯ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ  ದೈಹಿಕ ಶಿಕ್ಷಕರಾದ ಮಹಮ್ಮದ್ ಹ್ಯಾರಿಸ್ ಶುಭ ಹಾರೈಸಿದರು. 
 ಅಧ್ಯಕ್ಷತೆಯನ್ನು  ಕಾಲೇಜಿನ ಪ್ರಾಚಾರ್ಯರಾದ ಶ್ರೀ ಚಂದ್ರಶೇಖರ ಕೆ ವಹಿಸಿದ್ದರು. 

ಉಪನ್ಯಾಸಕರಾದ ಚೇತನ್ ಎಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಗಣೇಶ ಕೆ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಯರಾದ ಜೀವಿತ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು.  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು ಸಹಕರಿಸಿದರು.

ಪಂದ್ಯದ ಫಲಿತಾಂಶ:

 ತಾಲೂಕು ಮಟ್ಟದ ಬಾಲಕರ ವಿಭಾಗ ಮತ್ತು ಬಾಲಕಿಯರ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ತಂಡವು ಪ್ರಥಮ ಸ್ಥಾನವನ್ನು ಗಳಿಸಿತು. ದ್ವಿತೀಯ ಸ್ಥಾನವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯದ ತಂಡವು ಪಡೆಯಿತು. 

  ಬಾಲಕರ ವಿಭಾಗದಲ್ಲಿ ಸವ್ಯಸಾಚಿ ಆಟಗಾರನಾಗಿ ರಾಮಕುಂಜದ ಲಿಖಿತ್, 
ಉತ್ತಮ ಹಿಡಿತಗಾರನಾಗಿ ರಾಮಕುಂಜದ ಅಶ್ವಲ್,
ಉತ್ತಮ ಓಟಗಾರನಾಗಿ ಸುಬ್ರಹ್ಮಣ್ಯದ ಮನ್ವಿತ್ ಆಯ್ಕೆಯಾದರು.

ಬಾಲಕಿಯರ ವಿಭಾಗದಲ್ಲಿ ಸವ್ಯಸಾಚಿ ಆಟಗಾರ್ತಿಯಾಗಿ ರಾಮಕುಂಜದ ಪುಣ್ಯಶ್ರೀ, ಉತ್ತಮ ಹಿಡಿತಗಾರ್ತಿಯಾಗಿ ರಾಮಕುಂಜದ ಕೃಪಾ,
ಸುಬ್ರಹ್ಮಣ್ಯದ ಲಿಖಿತಾ ಉತ್ತಮ ಓಟಗಾರ್ತಿಯಾಗಿ ಆಯ್ಕೆಯಾದರು.