ರಾಷ್ಟ್ರೀಯ ಸೇವಾ ಮನೋಭಾವ ಬೆಳೆಸಲು ಎನ್ಎಸ್ಎಸ್ ಸಹಕಾರಿ- ಕು ಭಾಗೀರಥಿ ಮುರುಳ್ಯ

|

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2026-27ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಆಲಂತಾಯದಲ್ಲಿ ನೆರವೇರಿತು.

ವಿಶೇಷ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀ ಅಜಿತ್ ಕುಮಾರ್ ಪಾಲೇರಿಯವರು ಮಾತನಾಡುತ್ತಾ "ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳನ್ನು ತೆರೆದಿಡುತ್ತದೆ. ಅನೇಕ ಮೌಲ್ಯ ಶಿಕ್ಷಣಗಳ ವೇದಿಕೆ ಇದಾಗಿದೆ. ಇಂತಹ ಕಲಿಕೆ ಕೇವಲ ಪಾಠವಾಗದೆ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಅಷ್ಟು ಮಾತ್ರವಲ್ಲದೆ ಶ್ರಮದಾನದ ಮೂಲಕ ಕೆಲಸವನ್ನು ಕಲಿಯುವ ಮತ್ತು ಶಾರೀರಿಕವಾಗಿ ಸದೃಢರಾಗುವತ್ತ ಸ್ವಯಂಸೇವಕರು ಪಣತೊಡಬೇಕು. ಆ ಮೂಲಕ ಉತ್ತಮ ವ್ಯಕ್ತಿಗಳಾಗಿ ಮೂಡಿಬರುವಂತಾಗಬೇಕು." ಎಂದು ಹೇಳಿದರು. 

ಸಮಾರಂಭದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರು "ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಸೇವಾ ಮನೋಭಾವವನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಸಹಕಾರಿಯಾಗಿವೆ.ಇತ್ತೀಚಿಗೆ ಯುವ ಜನರು ಆಧುನಿಕತೆಯತ್ತ ಆಸಕ್ತಿಯನ್ನು ಹೊಂದಿದ್ದಾರೆ. ಅದು ತಪ್ಪಲ್ಲ. ಆದರೆ ಹಳ್ಳಿಯ ಜನರ, ಹಿರಿಯರ ಒಡನಾಟದಿಂದ ಯುವಜನರು ಜ್ಞಾನವನ್ನು, ಅನುಭವವನ್ನು ಸಂಪಾದಿಸಬಹುದು. ಇದರಿಂದ ಯುವಕರ ಅಭಿವೃದ್ಧಿ ಖಂಡಿತವಾಗಿಯೂ ಆಗುತ್ತದೆ. ಯುವಕರಲ್ಲಿ ಶಿಸ್ತು, ಸಂಯಮ, ಕ್ರಿಯಾಶೀಲತೆಯಂತಹ ಗುಣಗಳನ್ನು ಇಂತಹ ಶಿಬಿರಗಳು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಂತಹ ಈ ಶಿಬಿರವು ಯಶಸ್ವಿಯಾಗಿ ನೆರವೇರಲಿ" ಎಂದು ಶುಭ ಹಾರೈಸಿದರು. 

ವೇದಿಕೆಯಲ್ಲಿದ್ದ ಶ್ರೀರಾಮಕುಂಜೆಶ್ವರ ವಿದ್ಯಾವರ್ಧಕ ಸಭಾ ಇದರ ಸದಸ್ಯರಾದ ಶ್ರೀ ಲಕ್ಷ್ಮೀನಾರಾಯಣ ರಾವ್ ಆತೂರು, ಶ್ರೀ ಕ್ಷೇತ್ರ ಸೌತಡ್ಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರಶಾಂತ್ ರೈ ಅರಂತಬೈಲು, ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಗೌಡ,  ಧವಳಗಿರಿ ಕನ್ಸ್ಟ್ರಕ್ಷನ್ ಇದರ ಸಿವಿಲ್ ಇಂಜಿನಿಯರ್ ಶ್ರೀ ಮನೋಹರ, ಆಲಂತಾಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಲವ್ಲಿ ಜೋಸ್, ಆಲಂತಾಯ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ರಾಜೇಶ್ವರಿ, ಶಿಬಿರ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಸಿಬಿ ಶುಭಹಾರೈಸಿದರು.

ಕಾಲೇಜಿನ ಪ್ರಾಚಾರ್ಯರಾದ ಮತ್ತು ಶಿಬಿರದ ಮಾರ್ಗದರ್ಶಕರಾದ ಶ್ರೀ ಚಂದ್ರಶೇಖರ ಕೆ ಪ್ರಸ್ತಾವಿಕವಾಗಿ ಮಾತನಾಡುತ್ತಾ ಶಿಬಿರದ ಒಟ್ಟು ಪರಿಕಲ್ಪನೆಯನ್ನು ತೆರೆದಿಟ್ಟರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜನಾಧಿಕಾರಿ  ಶ್ರೀ ಕೀರ್ತನ್ ಬಿಜಿ ಸೇರಿದ ಎಲ್ಲರನ್ನು ಸ್ವಾಗತಿಸಿದರು. ಸಹ ಶಿಬಿರ ಅಧಿಕಾರಿಗಳಾದ  ಶ್ರೀ ಲೋಹಿತ್ ಕುಮಾರ್ ಧನ್ಯವಾದ ಸಮರ್ಪಿಸಿದರು. ಜನನಿ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕ ಶ್ರೀ ಪ್ರೀತಮ್ ಮತ್ತು ಘಟಕದ ನಾಯಕಿ ಕು. ಪ್ರೈಷಿಕಾ ಉಪಸ್ಥಿತರಿದ್ದರು . ಸಹ ಶಿಬಿರಾಧಿಕಾರಿಗಳಾದ ಶ್ರೀಮತಿ ಪ್ರಮೀಳಾ ಮತ್ತು ಉಪನ್ಯಾಸಕರಾದ ಶ್ರೀ ತಿಲಕಾಕ್ಷ ಕಾರ್ಯಕ್ರಮ ನಿರೂಪಿಸಿದರು.