ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಸಮೂಹ ಮಾಧ್ಯಮಗಳು ಎಂಬ ವಿಷಯವಾಗಿ ಉಪನ್ಯಾಸವನ್ನು ಆಯೋಜಿಸಲಾಯಿತು. ಇದಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಹಿರಿಯ ಚಲನಚಿತ್ರ ನಟ, ನಿರ್ದೇಶಕರಾದ ಶ್ರೀ ಎಂ.ಕೆ ಮಠ ಇವರು ಮಾತನಾಡುತ್ತಾ "ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳನ್ನು ಸದ್ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳ ವ್ಯೂಹದಲ್ಲಿ ಸಿಲುಕುತ್ತಿದ್ದಾರೆ. ಇದರಿಂದ ಅವರ ವ್ಯಕ್ತಿತ್ವದ ಏಳಿಗೆ ಯಾಗುವುದಕ್ಕಿಂತ ಅವನತಿಯೇ ಆಗುತ್ತಿದೆ. ಭಾರತ ದೇಶದ ಭವಿಷ್ಯದ ಪ್ರಜೆಗಳಾದ ತಾವೆಲ್ಲರೂ ಇಂತಹ ಗೀಳಿನಿಂದ ಹೊರ ಬಂದು ರಾಷ್ಟ್ರ ಕಾರ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡುವಂತಾಗಬೇಕು." ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಚಂದ್ರಶೇಖರ ಕೆ ಇವರು ಮಾತನಾಡುತ್ತಾ "ಶ್ರೀ ಎಂ.ಕೆ ಮಠ ಅವರು ಸಮಾಜದ ಕುರಿತಾಗಿ ನಿಜ ಕಳಕಳಿಯನ್ನು ಹೊಂದಿರುವಂತಹ ಅಪರೂಪದ ವ್ಯಕ್ತಿ. ಯಾವುದೇ ಪೂರ್ವಾಗ್ರಹವಿಲ್ಲದೆ ನಿಷ್ಪಕ್ಷಪಾತವಾಗಿ ಸಮಾಜದ ಹಿತವನ್ನು ಬಯಸುವ ಆದರ್ಶ ವ್ಯಕ್ತಿತ್ವ ಇವರದ್ದು. ವಿದ್ಯಾರ್ಥಿಗಳಾದ ತಾವೆಲ್ಲರೂ ಇಂತವರ ಮಾರ್ಗದರ್ಶನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯವನ್ನು ಹೊಂದಬೇಕು" ಎಂದು ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ ತಿಲಕಾಕ್ಷ ಕೆ ಸ್ವಾಗತಿಸಿ, ವಂದಿಸಿದರು.

