ರಾಮಕುಂಜ 10/07/2026 :ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘಗಳ ಚಟುವಟಿಕೆಗಳು ಉದ್ಘಾಟನೆಯು ನೆರವೇರಿತು. ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿದ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮತ್ತು ಎಸ್ ಆರ್ ಕೆ ಲಾಡರ್ಸ್ ನ ಮಾಲಕರಾದ ಶ್ರೀ ಕೇಶವ ಅಮೈಯವರು ಮಾತನಾಡುತ್ತಾ " ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ನಮ್ಮ ದೇಶದ ಆಡಳಿತವು ಪ್ರಜಾಪ್ರಭುತ್ವ ನೆಲೆಯಲ್ಲಿ ಕಾರ್ಯಚರಿಸುತ್ತಿದೆ. ಇದೇ ಮಾದರಿಯಲ್ಲಿ ಆಯ್ಕೆ ಆದ ಈ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರತಿ ನಾಯಕನೂ ತನ್ನ ಜವಾಬ್ದಾರಿಯನ್ನು ಅರಿತು ಕೆಲಸಮಾಡಬೇಕು. ಆಗ ದೇಶದ ಆಡಳಿತ ಯಂತ್ರ ಹೇಗೆ ನಡೆಯುತ್ತದೆ ಎಂಬ ವಿಚಾರ ವಿದ್ಯಾರ್ಥಿ ನಾಯಕರ ಅರಿವಿಗೆ ಬರುತ್ತದೆ. ಹಾಗಾಗಿ ಎಲ್ಲಾ ನಾಯಕರು ಉತ್ತಮವಾಗಿ ಕೆಲಸ ಮಾಡಿ ಭವಿಷ್ಯದಲ್ಲಿ ದೇಶದ ಆಸ್ತಿಯಾಗಬೇಕು" ಎಂದು ಕರೆ ಕೊಟ್ಟರು.
ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ದಾಮೋದರ ಎನ್ ಪ್ರಮಾಣ ವಚನ ಬೋಧಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ " ಈ ದಿನದಂದು ನಮ್ಮ ವಿದ್ಯಾರ್ಥಿ ಸಂಘದ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮತ್ತು ವಿವಿಧ ಸಂಘಗಳ ಚಟುವಟಿಕೆಗಳ ಉದ್ಘಾಟನೆಯು ನೆರವೇರಿದೆ. ನಮ್ಮ ಕಾಲೇಜಿನ ಈ ಎಲ್ಲ ಸಂಘಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಈ ಸಂಘಗಳ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು" ಎಂದು ಹೇಳಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರಾಧಾಕೃಷ್ಣ ಕೆ.ಎಸ್ ಇವರು ಮಾತನಾಡುತ್ತಾ "ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳು, ಅಧ್ಯಾಪಕ ವೃಂದ, ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಸ್ಥೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಬೇಕು. ಕಾರ್ಯಕ್ರಮಗಳ ಆಯೋಜನೆ ಮಾತ್ರವಲ್ಲದೇ ಉತ್ತಮ ಅಂಕ, ಫಲಿತಾಂಶವನ್ನು ಎಲ್ಲಾ ವಿದ್ಯಾರ್ಥಿಗಳು ಹೊಂದುವಲ್ಲಿ ಸಹಕರಿಸಬೇಕು. ಆಗ ನಮ್ಮ ಸಂಸ್ಥೆಯ ಉದ್ದೇಶದ ಈಡೇರಿಕೆ ಆಗುತ್ತದೆ." ಎಂದು ಹೇಳಿದರು.
ಬಳಿಕ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರ ನೂತನ ಟೀ ಶರ್ಟ್ ಉಡುಪನ್ನು ವೇದಿಕೆಯಲ್ಲಿದ್ದ ಗಣ್ಯರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್ ಆರ್ ಕೆ ಲಾಡರ್ಸ್ ಇದರ ಮಾಲಕರಾದ ಶ್ರೀ ಕೇಶವ ಅಮೈ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಈ ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಶ್ರೀ ಕೀರ್ತನ್, ಸರ್ಜನ ಸಾಂಸ್ಕೃತಿಕ ಸಂಘದ ಸಂಯೋಜಕರಾದ ಶ್ರೀ ತಿಲಕಾಕ್ಷ, ವಿಜ್ಞಾನ ಸಂಘದ ಸಂಯೋಜಕರಾದ ಬಿ ಸುಬ್ರಹ್ಮಣ್ಯ ಕಾರಂತ್, ಚುನಾವಣಾ ಅಧಿಕಾರಿಗಳಾದ ಶ್ರೀ ಚೇತನ್ ಎಂ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಜೀವಿತ ಮತ್ತು ಬಳಗದವರು ಪ್ರಾರ್ಥನೆರವೇರಿಸಿದರು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ರಕ್ಷಾ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಸುಶಾಂತ್ ಧನ್ಯವಾದ ಸಮರ್ಪಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಲಿಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

