ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ, ಪುತ್ತೂರು ತಾಲೂಕು ಸಮಿತಿ,ದ.ಕ ಜಿಲ್ಲೆ ಇದರ ನೂತನ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಯುಗಾದಿ ಪ್ರಯುಕ್ತ ವಿಶೇಷ ಕಾರ್ಯಕ್ರಮ

|

ನರಿಮೊಗರು:ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ, ಪುತ್ತೂರು ತಾಲೂಕು ಸಮಿತಿ,ದ.ಕ ಜಿಲ್ಲೆ ಇದರ ನೂತನ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಯುಗಾದಿ ಪ್ರಯುಕ್ತ ವಿಶೇಷ ಕಾರ್ಯಕ್ರಮವು ಶ್ರೀ ಸರಸ್ವತಿ ವಿದ್ಯಾ ಮಂದಿರ ನರಿಮೊಗರು ಇಲ್ಲಿ ಜರುಗಿತು.  ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ಸಮಿತಿಯ ಗೌರವಾಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ಇವರು ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡುತ್ತಾ 

" ಒಬ್ಬ ವ್ಯಕ್ತಿಯು ಉತ್ತಮವಾಗಿ ಬದುಕನ್ನು ಆನಂದಿಸುವಲ್ಲಿ ಸಾಹಿತ್ಯದ ಕೊಡುಗೆ ಅಪಾರ. ಇದನ್ನ ನಮ್ಮ ಯುವ ಪೀಳಿಗೆಗೆ ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ. ಮನೆ ಮನೆಗಳಲ್ಲಿ ಸಾಹಿತ್ಯದ ಚಟುವಟಿಕೆಗಳು ನಡೆದಾಗ ಅದರ ಅಭಿರುಚಿ ಎಲ್ಲರಲ್ಲಿಯೂ ಮೂಡುತ್ತದೆ. ಹಾಗಾಗಿ ಪುತ್ತೂರು ತಾಲೂಕು ಸಮಿತಿಯು ಈ ವರ್ಷ ರಾಷ್ಟ್ರೀಯತೆಯ ಒಲವು ಮೂಡಿಸುವ ಅನೇಕ ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡುವಂತಾಗಲಿ " ಎಂದು ಶುಭ ಹಾರೈಸಿದರು.

  ಬಳಿಕ ವಿಶೇಷ ಉಪನ್ಯಾಸವನ್ನು ನಡೆಸಿಕೊಟ್ಟ ಸರಸ್ವತಿ ವಿದ್ಯಾ ಮಂದಿರ ನರಿಮೊಗರು ಇದರ ಅಧ್ಯಕ್ಷರಾದ ಶ್ರೀ ಅವಿನಾಶ ಕೊಡಂಕಿರಿಯವರು ಮಾತನಾಡುತ್ತಾ " ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸರ್ವ ಭಾಷೆಗಳನ್ನು ಒಳಗೊಂಡ ಸಾಹಿತ್ಯ ಕೃಷಿಯನ್ನು ಮಾಡುತ್ತದೆ. ಪ್ರತಿ ವ್ಯಕ್ತಿಗೂ ಕೂಡ ವಿವಿಧ ಭಾಷೆಗಳ ಕಲಿಕೆ ಅಗತ್ಯವಾಗಿರುತ್ತದೆ. ಅವಿಭಜಿತ ದಕ್ಷಿಣ ಕನ್ನಡದ ಜನರಿಗೆ ಭಾಷೆ ಕಲಿಕೆ ಕಷ್ಟ ಏನು ಅಲ್ಲ. ಇಲ್ಲಿಯ ಜನರು ಐದಾರು ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲರು. ಶಿಕ್ಷಣ ವ್ಯವಸ್ಥೆಯಲ್ಲಿ ಭಾಷೆಗಳನ್ನು ಕಡಿಮೆ ಮಾಡುವುದರ ಬದಲು ಹೆಚ್ಚು ಮಾಡಿದಾಗ, ಸಾಹಿತ್ಯದ ಕಂಪು ವಿದ್ಯಾರ್ಥಿಗಳಲ್ಲಿ ಪಸರಿಸುತ್ತದೆ ಎಂದು ಹೇಳಿದ ಅವರು ಹಿರಿಯ ಸಾಹಿತಿಗಳಾದ ಡಾ. ಕೆ ವಿಷ್ಣು ಅವರ ಕೃತಿಗಳ ಪರಿಚಯವನ್ನು ಮಾಡಿದರು. ತದನಂತರ ಮುಖ್ಯ ಅಭ್ಯಾಗತರಾದ ಡಾ. ಕೆ ವಿಷ್ಣು ಇವರು ಮಾತನಾಡುತ್ತಾ " ಪ್ರತಿಯೊಬ್ಬರೂ ಕೂಡ "ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ" ಎಂಬಂತೆ ತಾನು ಬಹಳ ಸಣ್ಣವನು, ಉಳಿದವರೆಲ್ಲ ಸಾಕಷ್ಟು ತಿಳಿದವರು ಎಂದು ಭಾವಿಸಿದಾಗ ಪ್ರತಿಯೊಬ್ಬರ ಮನಸ್ಸು ಕಲಿಕೆಗೆ ಆಸ್ಪದ ನೀಡುತ್ತದೆ. ಇದರಿಂದ ಸಾಹಿತ್ಯ, ಜ್ಞಾನದ ಕುರಿತಾಗಿ ತಾತ್ಸಾರ ಭಾವ ಮೂಡದೆ ಸರ್ವವನ್ನೂ ಸ್ವೀಕರಿಸುವ ಗುಣ ವ್ಯಕ್ತಿಯಲ್ಲಿ ಬೆಳೆಯುತ್ತದೆ. ವೇದ ಉಪನಿಷತ್ತಿನ ಸಾರವು ಇದೇ ಆಗಿದೆ. ಪರರಿಗೆ ಪೀಡನೆಯನ್ನ ಮಾಡದೆ, ಲೋಕ ಹಿತಕ್ಕಾಗಿ ದುಡಿಯುವ ಧ್ಯೇಯ ನಮ್ಮ ಸಂಸ್ಕೃತಿಯದ್ದು. ಸಾಹಿತ್ಯ ಬಲಿಷ್ಠವಾದಾಗ ಈ ತತ್ವ ಪೀಳಿಗೆಯಿಂದ ಪೀಳಿಗೆಗೆ ಪ್ರವಹಿಸಲು ಸಾಧ್ಯ." ಎಂದು ಹೇಳಿದರು. ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀ ಗಣರಾಜ ಕುಂಬಳೆ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ವಿಭಾಗ ಸಂಯೋಜಕ ಶ್ರೀ ಸುಂದರ ಇಳಂತಿಲ ಉಪಸ್ಥಿತರಿದ್ದರು. 

ಪುತ್ತೂರು ತಾಲೂಕು ಸಮಿತಿಯ ಸದಸ್ಯರಾದ ಶ್ರೀ ಕುಮಾರ್ ಪೆರ್ನಾಜೆ ಸ್ವಾಗತಿಸಿ, ಸದಸ್ಯ ಶ್ರೀ ವಿಶ್ವನಾಥ ಕುಲಾಲ್ ಇವರು ಧನ್ಯವಾದ ಸಮರ್ಪಿಸಿದರು. ಸಮಿತಿಯ ಸದಸ್ಯೆ ಸ್ವಪ್ನ ಉದಯ್ ಕುಮಾರ್ ಇವರು ಸರಸ್ವತಿ ವಂದನೆ ನೆರವೇರಿಸಿದರು. ಕಾರ್ಯದರ್ಶಿ ಶ್ರೀ ನವೀನ ಕೃಷ್ಣ ಇವರು ಶಾಂತಿಮಂತ್ರ ಪಠಿಸಿದರು. ಮಾಧ್ಯಮ ಪ್ರಮುಖ ಚೇತನ್ ಮೊಗ್ರಾಲ್ ಕಾರ್ಯಕ್ರಮ ನಿರೂಪಿಸಿದರು.