ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಶುಭ ಶುಕ್ರವಾರ ಆಚರಣೆ

|

ನೆಲ್ಯಾಡಿ:ಯೇಸು ಕ್ರಿಸ್ತರ ಕಷ್ಟಾನುಭವ ಹಾಗೂ ಮರಣದ ಸ್ಮರಣೆಯ ‘ಶುಭ ಶುಕ್ರವಾರ’ದ ಪವಿತ್ರ ವಿಧಿವಿಧಾನಗಳನ್ನು ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.ಈ ಪವಿತ್ರ ವಿಧಿಯು ಸಾಷ್ಟಾಂಗ ನಮನ, ಯೇಸು ಕ್ರಿಸ್ತರ ಕಷ್ಟಾನುಭವದ ವಾಚನ, ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥನೆ, ಪವಿತ್ರ ಶಿಲುಬೆಯ ಆರಾಧನೆ ಹಾಗೂ ಪರಮ ಪ್ರಸಾದ ಸ್ವೀಕಾರದ ವಿಧಿಗಳನ್ನು ಒಳಗೊಂಡಿತ್ತು.

 ಆತಿಥಿ ಧರ್ಮಗುರುಗಳಾದ ವಂದನೀಯ ಫಾ ವಿನ್ಸೆಂಟ್ ಡಿಸೋಜಾ ಪ್ರವಚನ ನೀಡಿ ಕ್ರೈಸ್ತ ಜೀವನದಲ್ಲಿ ಶಿಲುಬೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. "ಶಿಲುಬೆಯು ದೇವರ ಪ್ರೀತಿ ಮತ್ತು ಭರವಸೆಯ ಸಂಕೇತ" ಎಂಬ ವಿಷಯದ ಕುರಿತು ಮಾತನಾಡಿದ ಅವರು, "ಮಾನವಕುಲದ ಉದ್ಧಾರಕ್ಕಾಗಿ ದೇವರು ಎಂತಹ ದೊಡ್ಡ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂಬುದಕ್ಕೆ ಕ್ರಿಸ್ತರ ಬಲಿದಾನವೇ ಸಾಕ್ಷಿ" ಎಂದರು.ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರುಗಳಾದ ವಂದನೀಯ ಫಾ ಗ್ರೇಶನ್ ಅಲ್ವಾರೀಸ್ ಉಪಸ್ಥಿತರಿದ್ದರು.

ಶುಭ ಶುಕ್ರವಾರದ ವಿಶೇಷತೆ

ಶುಭ ಶುಕ್ರವಾರವು ಕ್ರಿಶ್ಚಿಯನ್ ಹಬ್ಬವಾಗಿದ್ದು, ಯೇಸುವಿನ ಶಿಲುಬೆಗೇರಿಸುವಿಕೆಯನ್ನು ಸ್ಮರಿಸಿಕೊಳ್ಳುವುದನ್ನು ಆಚರಿಸಲಾಗುತ್ತದೆ. ಇದು ಪವಿತ್ರ ವಾರದಲ್ಲಿ ಆಚರಿಸಲಾಗುವ ಕ್ರಿಶ್ಚಿಯನ್ನರಿಗೆ ಧ್ಯಾನ ಮತ್ತು ಶೋಕದ ಗಂಭೀರ ದಿನವಾಗಿದೆ. ಇದು ಈಸ್ಟರ್ ಭಾನುವಾರದ ಮೊದಲು ಶುಕ್ರವಾರ ಬರುತ್ತದೆ.ಯೇಸುವಿನ ಶಿಲುಬೆಗೇರಿಸಿದ ನೆನಪಿಗಾಗಿ ಶುಭ ಶುಕ್ರವಾರವನ್ನು ಆಚರಿಸಲಾಗುತ್ತದೆ. ಈ ದಿನದಂದು ಯೇಸುವನ್ನು ಶಿಲುಬೆಗೇರಿಸಲಾಯಿತು ಎಂದು ಕ್ರಿಶ್ಚಿಯನ್ನರಲ್ಲಿ ವ್ಯಾಪಕವಾಗಿ ನಂಬಲಾಗಿದೆ. ಶಿಲುಬೆಗೇರಿಸಿದ ಮೂರು ದಿನಗಳ ನಂತರ ಯೇಸುವಿನ ಪುನರುತ್ಥಾನವನ್ನು ಈಸ್ಟರ್ ಎಂದು ಆಚರಿಸಲಾಗುತ್ತದೆ .ಕ್ರಿಶ್ಚಿಯನ್ ಧರ್ಮದಲ್ಲಿ, ಯೇಸು ಮರಣ ಹೊಂದಿದ ದಿನ, ಅವನು ಲೋಕದ ಪಾಪಗಳನ್ನು ತನ್ನೊಂದಿಗೆ ಹೊತ್ತುಕೊಂಡನು ಮತ್ತು ಅವನ ತ್ಯಾಗದಿಂದಾಗಿ ಜನರು ವಿಮೋಚನೆಗೊಂಡು ಮರಣದ ನಂತರ ಸ್ವರ್ಗವನ್ನು ತಲುಪಬಹುದು ಎಂದು ನಂಬಲಾಗಿದೆ. ಯೇಸುವಿನ ಶಿಲುಬೆಗೇರಿಸುವಿಕೆ ಮತ್ತು ಮರಣವು ಅವನ ತ್ಯಾಗ ಮತ್ತು ಮಾನವರು ಮಾಡಿದ ಎಲ್ಲಾ ಪಾಪಗಳಿಗೆ ಕ್ಷಮೆಯನ್ನು ಸಂಕೇತಿಸುತ್ತದೆ.