ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ನವೆಂಬರ್ 5ರಂದು ಗುರುವಾರ ಶಿಲಾನ್ಯಾಸ ನೆರವೇರಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಪವಿತ್ರ ಬಲಿಪೂಜೆ ನಡೆಯಲಿದ್ದು, 9.45ಕ್ಕೆ ಪ್ರಾರ್ಥನಾ ವಿಧಿ ಹಾಗೂ 10 ಗಂಟೆಗೆ ನೂತನ ಚರ್ಚ್ ನಿರ್ಮಾಣದ ಶಿಲಾನ್ಯಾಸ ಮತ್ತು ಸ್ಥಳದ ಆಶೀರ್ವಾದ ಸಮಾರಂಭ ಜರುಗಲಿದೆ.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೇಮ್ಸ್ ಪಟ್ಟೇರಿಲ್ , ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಲಾರೆನ್ಸ್ ಮುಕ್ಕುಯಿ ಹಾಗೂ ಪುತ್ತೂರು ಧರ್ಮ ಪ್ರಾಂತ್ಯದ ಅತೀ ವಂದನೀಯ ಡಾ. ಗೀವರ್ಗೀಸ್ ಮಕಾರಿಯೋಸ್ ಅವರು ಶಿಲಾನ್ಯಾಸ ಮತ್ತು ಆಶೀರ್ವಾದದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.
1990ರಲ್ಲಿ ನಿರ್ಮಾಣಗೊಂಡಿರುವ ಪ್ರಸ್ತುತ ಚರ್ಚ್ ಕಟ್ಟಡವು ಹಲವು ವರ್ಷಗಳ ಬಳಕೆಯಿಂದ ಶಿಥಿಲಾವಸ್ಥೆ ತಲುಪಿದ್ದು, ಸುರಕ್ಷತೆಯ ದೃಷ್ಟಿಯಿಂದ ನೂತನ ಚರ್ಚ್ ನಿರ್ಮಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸುಮಾರು 36 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದ ನವೀಕರಣವು ನೆಲ್ಯಾಡಿ ಪರಿಸರದ ಕ್ರೈಸ್ತ ಸಮುದಾಯದ ಬಹುದಿನಗಳ ಕನಸಾಗಿದೆ.
ವಿಶಾಲವಾದ ಆರಾಧನಾ ಮಂದಿರ, ಆಕರ್ಷಕ ವಾಸ್ತುಶಿಲ್ಪ ಹಾಗೂ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನೂತನ ಚರ್ಚ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಮಹತ್ವದ ಧಾರ್ಮಿಕ ಕಾರ್ಯದಲ್ಲಿ ಧರ್ಮಪ್ರಾಂತ್ಯದ ಗಣ್ಯರು, ಧಾರ್ಮಿಕ ಗುರುಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಭಕ್ತಾದಿಗಳು ಭಾಗವಹಿಸಲಿದ್ದಾರೆ.
ಚರ್ಚ್ ನಿರ್ಮಾಣದ ಈ ಮಹತ್ಕಾರ್ಯಕ್ಕೆ ಎಲ್ಲರ ಸಹಕಾರ ಮತ್ತು ಪ್ರಾರ್ಥನೆಯನ್ನು ಕೋರಲಾಗಿದೆ ಎಂದು ಚರ್ಚ್ನ ಧರ್ಮಗುರು ಫಾ. ಷಾಜಿ ಮ್ಯಾಥ್ಯೂ ತಿಳಿಸಿದ್ದಾರೆ.

